ಗೋಂಡರು-
ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟಿಗೆ ಸೇರಿದ ಒಂದು ಜನಾಂಗ. ಇವರು ತಮ್ಮನ್ನು ಕೋಯಿತುರ್ ಎಂದು ಕರೆದುಕೊಳ್ಳುತ್ತಾರೆ. ಇವರು ಆಡುವ ಭಾಷೆ ಗೋಂಡಿ (ನೋಡಿ- ಗೋಂಡಿ). ಗೋಂಡ ಶಬ್ದ ತೆಲುಗು ಭಾಷೆಯ ಕೊಂಡ ಎಂಬ ಶಬ್ದದಿಂದ ಬಂದದ್ದೆಂದು ಭಾಷಾವಿಜ್ಞಾನಿಗಳ ಅಭಿಪ್ರಾಯ. ಕೊಂಡ ಎಂದರೆ ತೆಲುಗಿನಲ್ಲಿ ಗುಡ್ಡ ಅಥವಾ ಪರ್ವತ ಎಂದು ಅರ್ಥ. ಕಾಲಕ್ರಮೇಣ ಕಕಾರ ಘೋಷಧ್ವನಿಯಾದ ಗಕಾರವಾಗಿ ಪರಿವರ್ತನೆಯಾಗಿ ಗೋಂಡ ಎಂದು ರೂಪಾಂತರ ಹೊಂದಿರಬೇಕು. ಹೇಮಚಂದ್ರನೇ ಮೊದಲಾದ ನಿಘಂಟುಕಾರರು ಗೋಂಡ ಶಬ್ದವನ್ನು ನೀಚಜಾತಿಸೂಚಕವೆಂದಿದ್ದಾರೆ. ಜನರಲ್ ಕನಿಂಗ್ ಹ್ಯಾಮ್ ಈ ಮಾತು ಗೌಡ ಎಂಬ ಶಬ್ದದಿಂದ ಉತ್ಪನ್ನವಾದದ್ದು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಕ್ರಿ. ಶ. 605ರಲ್ಲಿ ಹರ್ಷವರ್ಧನನ ಅಣ್ಣನಾದ ಕನೌಜದ ದೊರೆ ಮಾಲವ ದೇಶದ ಮೇಲೆ ದಾಳಿ ಮಾಡಿದಾಗ ಅವನಿಗೆ ಸಹಾಯ ಮಾಡಿದ ಗೌಡದೇಶದ ರಾಜರೇ ಗೋಂಡ ರಾಜರೆಂದು ಈತನ ಅಭಿಪ್ರಾಯ. ಈತ ಗೋಂಡ ಶಬ್ದದ ವ್ಯುತ್ಪತ್ತಿಯನ್ನು ವಿವರಿಸುತ್ತ ಅದು ಗೌರ ಎಂಬ ಶಬ್ದದಿಂದ ಹುಟ್ಟಿ ಗೋದ ಹಾಗೂ ಕೋದಗಳಾಗಿ ಪರಿವರ್ತನೆ ಹೊಂದಿ ಅನಂತರ ಗೋಂಡ ಆಯಿತೆಂದು ಹೇಳುತ್ತಾನೆ. ಈ ಅಭಿಪ್ರಾಯವನ್ನು ಒಪ್ಪದ ವಿ. ವಿ. ಸ್ಮಿತ್ ಗೌಡದೇಶ ಬಂಗಾಳಕ್ಕೆ ಅನ್ವಯಿಸುತ್ತದೆಯಲ್ಲದೆ ಮಧ್ಯಪ್ರದೇಶಕ್ಕೆಲ್ಲ ಎನ್ನತ್ತಾರೆ. 

ಅಭಿಪ್ರಾಯಗಳು ಏನೇ ಇರಲಿ, ಈ ಜನ ಮಧ್ಯಪ್ರದೇಶದ ವಿಂಧ್ಯ ಮತ್ತು ಸತ್ಪುಡಾ ಪರ್ವತಗಳ ಮಧ್ಯದಲ್ಲಿಯೂ ನರ್ಮದಾ ನದಿಯ ಎರಡು ಕಡೆಗಳಲ್ಲೂ ನೆಲೆಸಿದ್ದಾರೆ. ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒರಿಸ್ಸ ರಾಜ್ಯಗಳಲ್ಲಿಯೂ ಇವರನ್ನು ಕಾಣಬಹುದು. 1901ರ ಜನಗಣತಿಯ ಪ್ರಕಾರ ಇವರ ಸಂಖ್ಯೆ 31,07,225 ಗೋಂಡರ ಇತಿಹಾಸದ ಬಗ್ಗೆ ಇರುವ ದಂತಕಥೆಗಳಲ್ಲಿ ಮೂರು ಹೀಗಿವೆ. 

1 ಒಮ್ಮೆ ಪಾರ್ವತಿಯ ಇಚ್ಛೆಯಂತೆ ಪರಮೇಶ್ವರ ಕೆಲವು ಜನರನ್ನು ಸೃಷ್ಟಿಮಾಡಿ ಅವರನ್ನು ಗೋಂಡರು ಎಂದು ಕರೆದ. ಆದರೆ ಆ ಜನರ ಮಲಿನತೆ ಹಾಗೂ ದುರ್ಗಂಧವನ್ನು ಸಹಿಸಲಾರದ ಪರಮೇಶ್ವರ ಅವರನ್ನು ಧವಳಗಿರಿಯ ಒಂದು ಗವಿಯಲ್ಲಿ ಅಡಗಿಸಿಟ್ಟ. ಕೆಲಕಾಲಾನಂತರ ರಾಯಲಿಂಗ ಎಂಬ ಸಾಧು ಗವಿಯಲ್ಲಿದ್ದವರನ್ನೆಲ್ಲ ಹೊರತೆಗೆದು ಅವರಿಗೆ ಸ್ವಚ್ಛತೆಯನ್ನು ಬೋಧಿಸಿದ. ಅವರ ಸಂತಾನವೇ ಈಗಿನ ಗೋಂಡ ಜನ. 

2 ಇನ್ನೊಂದು ಕಥೆಯ ಪ್ರಕಾರ ಸೃಷ್ಟಿಯ ಆದಿಯಲ್ಲಿ ಸಮುದ್ರ ಮಧ್ಯದಲ್ಲಿ ಸಿಂಗಮಾಲಿ ಎಂಬ ಎರಡು ಪಕ್ಷಿಗಳಿದ್ದವು. ಅವುಗಳಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು. ಹೆಣ್ಣು ಪಕ್ಷಿ ಇಟ್ಟ ಎರಡು ತತ್ತಿಗಳಿಂದ ಒಬ್ಬ ಹುಡುಗ ಮತ್ತು ಹುಡುಗಿ ಜನಿಸಿದರು. ಹುಡುಗನ ಹೆಸರು ಆದಿರಾವಣ ಪರಿಯಲ್ ಹುಡುಗಿಯ ಹೆಸರು ಸುಕುಮಾದೇವೀವೀಲರ್. ಸಮುದ್ರದೇವತೆ ಇವರಿಬ್ಬರನ್ನೂ ತೀರಕ್ಕೆ ಹಾಕಿದಳು. ಇವರಿಬ್ಬರೂ ಸ್ನಾನ ಮಾಡುತ್ತದ್ದ ಬಳಿ ಪೊಕರಾ ಎಂಬ ಗಿಡಮೂಲಿಕೆ ಬೆಳೆದಿತ್ತು. ಆದಿರಾವಣ ಸುಕುಮಾದೇವಿಗೆ ಅದನ್ನು ತಿನ್ನಕೂಡದೆಂದು ತಿಳಿಸಿದ್ದ. ಆತ ಬೇಟೆಗೆ ಹೋಗಿದ್ದ ವೇಳೆ ಸುಕುಮಾದೇವಿ ಕುತೂಹಲಕ್ಕಾಗಿ ಆ ಮೂಲಿಕೆಯನ್ನು ತಿಂದಳು. ಇದರಿಂದ ಆಕೆ ಗರ್ಭಿಣಿಯಾದಳು. ವಿಷಯ ತಿಳಿದ ಆದಿರಾವಣ ಭವಿಷ್ಯವನ್ನು ಕೇಳಲಾಗಿ ಆಕೆಯ ಬಸಿರಿನಿಂದ ದೇವತೆಗಳ ಸೃಷ್ಟಿಯಾಗುವುದಿದೆಯೆಂದು ತಿಳಿದು ಬಂತು. ಅನಂತರ ಆಕೆಯಲ್ಲಿ 100 ದೇವತೆಗಳು, 36 ಜಗತ್ ದೇವತೆಗಳು, 18 ಕೋಸ ದೇವತೆಗಳು, 14 ಗೋಂಡಿ ದೇವತೆಗಳು ಜನಿಸಿದರು. ಈ ಗೋಂಡಿದೇವತೆಗಳಿಂದ ಗೋಂಡರ ವಂಶ ಬೆಳೆಯಿತೆಂದು ಒಂದು ಕಥೆ. ಈ ವೃತ್ತಾಂತ ಬೈಬಲಿನ ಹಳೆಯ ಒಡಂಬಡಿಕೆಯ ಆಡಂ ಮತ್ತು ಈವ್‍ರ ಪ್ರಕರಣವನ್ನು ಹೋಲುತ್ತದೆ. 

3 ಇನ್ನೊಂದು ಕಥೆಯ ಪ್ರಕಾರ ಸ್ವರ್ಗದಲ್ಲಿದ್ದ ರಾಯೀಲಿಂಗ ಎಂಬಾತ ಭೋಜ ಮತ್ತು ತಾಲಕೋ ಎಂಬ ರಾಜ ರಾಣಿಯರಲ್ಲಿ ಜನ್ಮ ತಾಳಿ ಗೋಂಡ ಜಾತಿಯ ಉತ್ಪತ್ತಿಗೆ ಕಾರಣನಾದನೆನ್ನಲಾಗಿದೆ. 

ಗೋಂಡರು ಸಾಮಾನ್ಯ ಎತ್ತರದವರು. ಬಣ್ಣ ಸ್ವಲ್ಪ ಕಪ್ಪು ಇವರು ಮೊದಲಿಗೆ ತುಂಬ ಕ್ರೂರಿಗಳು. ಕ್ರಿ. ಶ. 1565 ರಲ್ಲಿ ಆಳಿದ ರಾಣಿ ದುರ್ಗಾವತಿ ಇವರ ಸಾಮ್ರಾಜ್ಞಿ. ಇಂದಿಗೂ ರಾಣಿ ದುರ್ಗಾವತಿಯನ್ನು ಈ ಜನ ಪೂಜಿಸುತ್ತಾರೆ. ಗೋಂಡರ ಉಪಜಾತಿಯಾದ ಬಸ್ತಾರಿನ ಮಾಡಿಯಾ ಎಂಬ ಆದಿವಾಸಿಗಳು ಫೋತುಲ ಎಂಬ ನಿದ್ರಾಶಾಲೆಯನ್ನು (ಡಾರ್ಮಿಟರಿ) ನಡೆಸುತ್ತಾರೆ. ಇಲ್ಲಿ ಅವಿವಾಹಿತ ಹುಡುಗ ಹುಡುಗಿಯರಿಗೆ ಎಲ್ಲ ವಿಧವಾದ ಶಿಕ್ಷಣವನ್ನೂ ಕೊಡಲಾಗುತ್ತದೆ. ಆದರೆ ಈಗೀಗ ಇದು ಕಡಿಮೆಯಾಗಿದೆ. ಇವರು ಹೆಚ್ಚಾಗಿ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಭೂಮಿತಾಯಿಗೆ ಕೋಳಿ ಮುಂತಾದವನ್ನು ಬಲಿ ಕೊಡುತ್ತಾರೆ. ಭೂತಪ್ರೇತಗಳಲ್ಲಿ ಇವರಿಗೆ ಅಗಾಧವಾದ ವಿಶ್ವಾಸ. ಮದ್ಯ ಸೇವನೆ ಇವರಲ್ಲಿ ಬಹು ಸಾಮಾನ್ಯ. ಇವರಲ್ಲಿ ಧುರ್ವಾ, ಮರ್ಕಾಮ, ಟೇಕಾಮ, ಪರತೇತಿ, ಇಡಪಾಚೀ ಮುಂತಾದ ಗೋತ್ರಗಳಿವೆ. ಸ್ವಗೋತ್ರ ವಿವಾಹ ನಿಷಿದ್ಧ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಇವರನ್ನು ಹಿಂದುಳಿದ ಜನಾಂಗವೆಂದು ಪರಿಗಣಿಸಿ ಎಲ್ಲ ರೀತಿಯ ಸೌಲಭ್ಯಗಳನ್ನೂ ನೀಡುತ್ತಿದೆ.	(ಕೆ.ಪಿಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ